RA NEWS:-ಅಲಮೇಲು ಶಾಪಕ್ಕೂ ದಸರೆಗೂ ಇರುವ ಸಂಬಂಧವೇನು ಗೊತ್ತಾ. . ?

ಮೈಸೂರು ಒಡೆಯರ್ ವಂಶದ ಇತಿಹಾಸ ತಿಳಿಯಲು ಹಲವು ಶಾಸನಗಳು ಮಾತ್ರವಲ್ಲದೆ,ಅರಮನೆಯಲ್ಲಿರುವ ಹಲವು ಐತಿಹಾಸಿಕ ದಾಖಲೆಗಳು ಇವೆ. ಅಲ್ಲದೆ ಸಾಹಿತ್ಯಿಕ ಪುಸ್ತಕಗಳಲ್ಲು ಮೈಸೂರು ಒಡೆಯರ್ ವಂಶಜರ ಇತಿಹಾಸ ತಿಳಿಯಬಹುದಾಗಿದೆ. ಇಂಥ ಪುಸ್ತಕಗಳಲ್ಲಿ ‘ಕಂಠೀರವ ನರಸರಾ ವಿಜಯ’ ‘ಚಿಕ್ಕ ದೇವರಾಜ ಭಿನ್ನಪಂ’ ‘ಚಿಕ್ಕ ದೇವರಾಜ ವಂಶಾವಳಿ’ ‘ಕೆಳದಿ ನೃಪ ವಿಜಯಂ’ ಪ್ರಮುಖವಾದುದು. ಹಾಗೆಯೇ, ಕೀರ್ಮಾನಿ ಎಂಬ ಪರ್ಷಿಯನ್ ವಿದ್ವಾಂಸ ಬರೆದ ‘ನಿಶಾನ್ ಎ ಹೈದರಿ’ ಎಂಬ ಪರ್ಷಿಯನ್ ಕೃತಿ ಹೈದರಾಲಿ ಹೇಗೆ ಒಡೆಯರ್ ವಂಶಸ್ಥರನ್ನು ಮೂಲೆ ಗುಂಪು ಮಾಡಿ ಅಧಿಕಾರ ಕಬಳಿಸಿ,ಮೆರೆದ ಎಂಬ ವಿವರ ಸಿಗುತ್ತದೆ. ಹೈದರಾಲಿ ಮತ್ತು ಟಿಪ್ಪು ಬಗ್ಗೆ ಕನ್ನಡ,ಮರಾಠಿ,ತಮಿಳು,ತೆಲುಗು ಭಾಷೆಗಳಲ್ಲದೆ, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಯಲ್ಲು ಹಲವಾರು ಪುಸ್ತಕಗಳು ಬಂದಿವೆ. ಹೀಗೆ ಮೈಸೂರು ಅರಮನೆಯಲ್ಲಿದ್ದ ಶಾಸನ ಮತ್ತಿತರ ದಾಖಲೆಗಳನ್ನು ಆಧರಿಸಿ ಕ್ರಿ.ಶ.1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ “ಮೈಸೂರು ಒಡೆಯರ್ ವಂಶಾವಳಿ”ಪುಸ್ತಕ ಹೊರತಂದಿದೆ. ಅಧ್ಯಯನ ಯೋಗ್ಯ ಕೃತಿಯಾದ ಇದರಲ್ಲಿ ಮೈಸೂರಿನ 600 ವರ್ಷಗಳ ಇತಿಹಾಸವನ್ನು ಸೊಗಸಾಗಿ ಸಾದರಪಡಿಸಲಾಗಿದೆ. ಈ ಕೃತಿಯ ಪ್ರಕಾರ ಮೈಸೂರು ಒಡೆಯರ್ ವಂಶದ ಮೊದಲ ಸ್ವತಂತ್ರ ರಾಜನಾದ ರಾಜ ಒಡೆಯರ್ (ಕ್ರಿ.ಶ.1578-1617) ಮೊದಲ ಬಾರಿ ದಸರೆ ಉತ್ಸವ ಏಕೆ ಆರಂಭಿಸಿದನೆಂಬ ವಿವರ ಸಿಗುತ್ತದೆ.
ವಿಜಯ ನಗರದÀ ಅರಸರು ನಡೆಸುತ್ತಿದ್ದ ದಸರೆಯನ್ನು ಮೈಸೂರು ಅರಸರು ಮುಂದುವರೆಸಿದರೆಂಬುದು ಸತ್ಯವಾದರೂ ಅದಕ್ಕೆ ಬೇರೆ ಕಾರಣಗಳೂ ಇವೆ. ಮೈಸೂರು ಅರಸರ ವಂಶಾವಳಿ ಪತ್ರದ ಪ್ರಕಾರ ಕ್ರಿ.ಶ. 1610ರಲ್ಲಿ ರಾಜ ಒಡೆಯರ್ ದಸರಾ ಉತ್ಸವ ಆರಂಭಿಸಲು ಮಗ ನರಸರಾಜ ಒಡೆಯರ್ ಅಕಾಲಿಕ ಮರಣ ಕಾರಣ. ರಾಜ ಪುರೋಹಿತರ ಸಲಹೆ ಮೇರೆಗೆ ರಾಜ ಒಡೆಯರ್ ದಸರೆ ಆಚರಣೆ ಆರಂಭಿಸುತ್ತಾರೆ ಎನ್ನುವ ರೋಚಕ ವಿಷಯ ದೊರಕುತ್ತದೆ.
ಕ್ರಿ.ಶ. 1399ರಲ್ಲಿ ಗುಜರಾತಿನ ಕಾತೇವಾಡದ ರಾಜ ವಂಶಜರಾದ ಯದುರಾಯ ಮತ್ತು ಕೃಷ್ಣರಾಯ ಸಹೋದರರು ದ್ವಾರಕೆಯಿಂದ ಮೈಸೂರಿಗೆ ಬಂದು ಮೈಸೂರು ಪಾಳೇಗಾರ ದಿವಂಗತ ಚಾಮರಾಜ ಅರಸು ಪುತ್ರಿ ಚಿಕ್ಕ ದೇವರಸಿ ಮದುವೆಯಾಗಲು ಕಿರುಕುಳ ನೀಡುತ್ತಿದ್ದ ಕಾರ್ಗಳ್ಳಿಯ ಪಾಳೇಗಾರ ಮಾರನಾಯಕನೆಂಬ ದುರುಳನನ್ನು ಸಂಹರಿಸುತ್ತಾರೆ. ಇದರಿಂದ ಸಂಪ್ರೀತರಾದ ರಾಜಮಾತೆ ದೇವಾಜಮ್ಮಣ್ಣಿ ತಮ್ಮ ಪುತ್ರಿ ಚಿಕ್ಕ ದೇವರಸಿಯನ್ನು ಯದುರಾಯನಿಗೆ ಮದುವೆ ಮಾಡುವುದರ ಮೂಲಕ ಅವರನ್ನು ಕ್ರಿ.ಶ. 1400ರ ಏಪ್ರಿಲ್.29ರಂದು ಪಟ್ಟಾಭಿಷೇಕ ಮಾಡುತ್ತಾರೆ. ಅಂದಿನಿಂದ ಯದುವಂಶದ ಆಳ್ವಿಕೆ ಆರಂಭವಾಗುತ್ತದೆ. “ಮೈಸೂರಿನ ಒಡೆಯ” ಎಂಬ ಬಿರುದು ಸಂಪಾದಿಸಿದ ಯದುರಾಯನ ವಂಶದವರನ್ನೆಲ್ಲಾ ಗೌರವ ಪೂರ್ವಕವಾಗಿ ಬಿರುದಾವಳಿಯನ್ನೆ ಸಂಬೋಧಿಸುತ್ತಿದ್ದರಿಂದ ಒಡೆಯರು ಎಂದು ಕರೆವ ವಾಡಿಕೆ ಎಲ್ಲಾ ಮಹಾರಾಜರಿಗೂ ಮುಂದುವರೆಯಿತೆನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ, ಆಗಿನ್ನು ಸಂಸ್ಕøತ ಪದಗಳು ಮೈಸೂರಿನ ಬುಡಕಟ್ಟು ಭಾಗದಲ್ಲಿ ಬಂದಿರದಿದ್ದರಿಂದ ಅರ್ಥವತ್ತಾದ ಕನ್ನಡದ ಪದ “ಒಡೆಯರು” ಎಂದು ರಾಜರನ್ನು ಸ್ಥಳೀಯ ಜನ ಕರೆಯುತ್ತಿದ್ದುದೇ ಇವರ ಹೆಸರಿನ ಮುಂದೆ ಒಡೆಯರ್ ಪದ ಬಳಕೆ ಮುಂದುವರೆಯಿತೆನ್ನಲಾಗುತ್ತದೆ.
ಯದುರಾಯನ ಪುತ್ರ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಕ್ರಿ.ಶ. 1408-1459)ನಂತರ ಇವರ ಮಗ ತಿಮ್ಮರಾಜ ಒಡೆಯರ್, (1459-1478), ಹಿರಿಯ ಚಾಮರಾಜ ಒಡೆಯರ್ (1478-1513) ಇಮ್ಮಡಿ ಹಿರಿಯ ಚಾಮರಾಜ ಒಡೆಯರ್ (1513-1553) ಇಮ್ಮಡಿ ತಿಮ್ಮರಾಜ ಒಡೆಯರ್ (1553-1572) ನಾಲ್ವಡಿ ಬೋಳ ಚಾಮರಾಜ ಒಡೆಯರ್ (1572-1576) ಬೆಟ್ಟದ 5ನೇ ಚಾಮರಾಜ ಒಡೆಯರ್ (1576-1578) ರವರೆಗೂ ಹೆಚ್ಚಿನ ವಿವರ ದೊರೆಯುವುದಿಲ್ಲ. ಆದರೆ ಯದುವಂಶದ 9ನೇ ದೊರೆ ರಾಜ ಒಡೆಯರ್(1578-1617) ಆಳ್ವಿಕೆಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳು ಒಡೆಯರ ವಂಶಾವಳಿಯಲ್ಲಿ ಉಲ್ಲೇಖವಾಗಿದೆ.
ಯದುವಂಶದ 7ನೇ ದೊರೆ ನಾಲ್ವಡಿ ಚಾಮರಾಜ ಒಡೆಯರ್ (ಜನನ 1518) ಒಮ್ಮೆ ಚಾಮುಂಡಿಬೆಟ್ಟಕ್ಕೆ ಹೋಗುವಾಗ ಸಿಡಿಲು ಬಡಿಯುತ್ತದೆ. ದೇವಿ ಶ್ರೀರಕ್ಷೆ ರಾಜವಂಶಕ್ಕೆ ಇದ್ದ ಕಾರಣ ಸಿಡಿಲಿನ ಹೊಡೆತ ನಾಲ್ವಡಿ ಚಾಮರಾಜ ಒಡೆಯರ ದೇಹಕ್ಕೆ ಕೆಡುಕು ಮಾಡದೆ ತಲೆ ಕೂದಲಿಗೆ ಮಾತ್ರ ತಗುಲುತ್ತದೆ. ಹೀಗಾಗಿ ಜೀವನ ಪರ್ಯಂತ ಬೋಳಾಗಿದ್ದ ಇವರನ್ನು ಬೋಳ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುತ್ತಿದ್ದರು. ಇವರಿಗೆ ಸಿಂಧುವಳ್ಳಿ ರಾಜಯ್ಯನ ಮಗಳು ವೀರರಾಜಮ್ಮಣ್ಣಿ , ಕೋಟೆ ತಿಮ್ಮಪ್ಪ ಒಡೆಯರ್ ಪುತ್ರಿ ದೇವಾಜಮ್ಮಣ್ಣಿ ಎಂಬ ಇಬ್ಬರು ಪತ್ನಿಯರು. ಇವರಲ್ಲಿ ಮೊದಲ ಪತ್ನಿ ವೀರಾಜಮ್ಮಣ್ಣಿಗೆÉ 5ನೇ ಬೆಟ್ಟದ ಚಾಮರಾಜ ಒಡೆಯರ್ ಹಾಗೂ ದೊಡ್ಡ ದೇವಿರಮ್ಮಣ್ಣಿ , ಚಿಕ್ಕ ದೇವಿರಮ್ಮಣ್ಣಿ ಸೇರಿದಂತೆ ಐವರು ಮಕ್ಕಳು . ಎರಡನೇ ಪತ್ನಿ ದೇವಾಜಮ್ಮಣ್ಣಿಗೆ ಮುಪ್ಪಿನ ತಿಮ್ಮಪ್ಪ ಒಡೆಯರ್ ಮತ್ತು ರಾಜ ಒಡೆಯರ್ ಎಂಬ ಇಬ್ಬರು ಮಕ್ಕಳು.
ಯದು ವಂಶದ 8ನೇ ದೊರೆಯಾಗಿ 5ನೇ ಬೆಟ್ಟದ ಚಾಮರಾಜ ಒಡೆಯರ್ ಪಟ್ಟಕ್ಕೆ ಬಂದರೂ,ಹೆಚ್ಚು ಕಾಲ ಆಳ್ವಿಕೆ ನಡೆಸುವುದಿಲ್ಲ. ಅನಾರೋಗ್ಯ ಪೀಡಿತರಾದ ಅಣ್ಣನಾದ 5ನೇ ಬೆಟ್ಟದ ಚಾಮರಾಜ ಒಡೆಯರ್‍ಗೆ ವಿಶ್ರಾಂತಿ ನೀಡಿ, ಯದು ವಂಶದ 9ನೇ ದೊರೆಯಾದ ಒಂದನೇ ರಾಜ ಒಡೆಯರ್,ಮೊದಲ ಸ್ವತಂತ್ರ ರಾಜನೆಂಬ ಹೆಗ್ಗಳಿಕೆ ಸಂಪಾದಿಸುತ್ತಾರೆ. ಆವರೆಗೂ ಎಲ್ಲಾ 8 ರಾಜರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಾಗಿ ಪ್ರತಿ ವರ್ಷ ಕಪ್ಪ ಕಾಣಿಕೆ ಕೊಡುತ್ತಿದ್ದರು. ಕ್ರಿ.ಶ.1552ರಲ್ಲಿ ಜನಿಸಿದ ಒಂದನೇ ರಾಜ ಒಡೆಯರ್ ಕ್ರಿ.ಶ.1578ರಲ್ಲಿ ಪಟ್ಟಾಭಿಷಿಕ್ತನಾದ ನಂತರ ವಿಜಯನಗರ ರಾಜರಿಗೆ ನೀಡುತ್ತಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿಲ್ಲಿಸಿ,ತಾವು ಸ್ವತಂತ್ರ ರಾಜನೆಂದು ಘೋಷಿಸಿಕೊಂಡಿದ್ದಲ್ಲದೆ,ವಿಜಯ ನಗರ ಸಾಮ್ರಾಜ್ಯದ ಪೆನುಗೊಂಡೆಯ ಎರಡನೇ ವೆಂಕಟನಿಂದ ಮೈಸೂರು ರಾಜ ಎಂಬ ಮನ್ನಣೆಗೂ ಪಾತ್ರನಾಗುತ್ತಾನೆ. ತನ್ನ ಅಧಿಕಾರಾವಧಿಯಲ್ಲಿ ಕ್ರಿ.ಶ.1595ರಿಂದ 1617ರವರೆಗು ಅಕ್ಕಿ ಹೆಬ್ಬಾಳು,ರಂಗ ಸಮುದ್ರ,ಅರಕೆರೆ,ಸೋಸಲೆ,ಬನ್ನೂರು,ಕನ್ನಂಬಾಡಿ,ಯಳಂದೂರು,ಸತ್ತೇಗಾಲ,ನರಸೀಪುರ,ತಲಕಾಡು,ತೆರಕಣಾಂಬಿ,ಕಳಸ,ಹೆಗ್ಗಡ ದೇವನ ಕೋಟೆ,ಬಿಳಿಕೆರೆ,ಮೂಗೂರು,ಉಮ್ಮತ್ತೂರು ಸೇರಿದಂತೆ ಮೈಸೂರು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ಮೈಸೂರು ರಾಜ ಸಂಸ್ಥಾನ ವಿಸ್ತರಿಸಿದ.
ಒಮ್ಮೆ ರಾಜ ಒಡೆಯರ್ ತಮ್ಮ ನಂಜನಗೂಡಿಗೆ ತೆರಳುವಾಗ ಕಾರ್ಗಳ್ಳಿಯ ಪಾಳೇಗಾರ ಕುತಂತ್ರಿ ವೀರರಾಜಯ್ಯ ಮಾರ್ಗ ಬಿಡದೆ ಸತಾಯಿಸಿದಾಗ ಆತನ ಮೇಲೆ ಎರಗಿದ ರಾಜ ಒಡೆಯರ್ ಸರಿಯಾಗಿ ಬುದ್ದಿ ಕಲಿಸಿದ್ದರು. ಅಪಮಾನಿತನಾದ ಕಾರ್ಗಳ್ಳಿಯ ವೀರರಾಜಯ್ಯ ಮೋಸದಿಂದ ರಾಜ ಒಡೆಯರ್‍ನ್ನು ಕೊಲ್ಲಿಸಲು ವೆಂಕಟರಮಣ ದೇವಸ್ಥಾನದ ಅರ್ಚಕನ ಮೂಲಕ ವಿಷದ ತೀರ್ಥ ಕುಡಿಸಿ ಕೊಲ್ಲಲು ಸಂಚುರೂಪಿಸುತ್ತಾನೆ. ಅದರಂತೆ ವಿಷ ಬೆರೆಸಿದ ತೀರ್ಥವನ್ನು ವೆಂಕಟರಮಣ ದೇವಸ್ಥಾನದ ಅರ್ಚಕ ಶ್ರೀನಿವಾಸಯ್ಯ ನೀಡುವಾಗ ಆತನ ಕೈ ನಡುಗುತ್ತಿರುತ್ತದೆ. ಹೀಗೇಕೆ ನಡುಗುತ್ತಿದ್ದೀರಿ ಎಂದು ರಾಜ ಒಡೆಯರ್ ಪ್ರಶ್ನಿಸಿದಾಗ ಅವರ ಕಾಲಿಗೆ ಬಿದ್ದು,ತಾನು ತೀರ್ಥಕ್ಕೆ ವಿಷ ಬೆರೆಸಿರುವ ವಿಷಯ ತಿಳಿಸುತ್ತಾನೆ. ತಕ್ಷಣವೇ ರಾಜ ಒಡೆಯರ್ ಕಾರ್ಗಳ್ಳಿಯ ವೀರರಾಜಯ್ಯನನ್ನು ಬಂಧಿಸಿ ಅವÀನ ಕಿವಿ, ಮೂಗು ಕತ್ತರಿಸಿ ಗಡಿ ಪಾರು ಮಾಡಿದ. ಅರ್ಚಕ ಶ್ರೀನಿವಾಸಯ್ಯನನ್ನು ಕ್ಷಮಿಸಿ ಕನ್ನಂಬಾಡಿಯ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ವರ್ಗಾಯಿಸಿದ್ದ.

mysore dasara
mysore dasara

ಈ ಘಟನೆ ನಂತರ ಸುತ್ತಲ ಪಾಳೇಗಾರರಲ್ಲಿ ಮೈಸೂರು ಒಡೆಯರ ಬಗ್ಗೆ ಭಯ, ಗೌರವ ಹೆಚ್ಚಾಗುತ್ತದೆ. ಅಲ್ಲಿಯವರೆಗೂ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿದ್ದ ಶ್ರೀರಂಗಪಟ್ಟಣದ ಶ್ರೀರಂಗರಾಯರಿಗೆ ಸಲ್ಲುತ್ತಿದ್ದ ಗೌರವಾದರಗಳು ಮೈಸೂರು ಒಡೆಯರಿಗೆ ದೊರೆಯತೊಡಗುತ್ತದೆ. ಸಹಜವಾಗಿಯೇ ಶ್ರೀರಂಗರಾಯರಿಗೆ ಅಸಮಾಧಾನ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯ ಇರುವವರೆಗೂ ಕಾಲಕಾಲಕ್ಕೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದ ಮೈಸೂರು ಒಡೆಯರು ಮತ್ತಿತರ ಪಾಳೆಗಾರರು ಅಧಃಪತನದವಾದ ನಂತರ ಶ್ರೀರಂಗರಾಯರಿಗೆ ಕಪ್ಪ ಕೊಡುವುದನ್ನು ನಿಲ್ಲಿಸುತ್ತಾರೆ. ಇದು ಶ್ರೀರಂಗರಾಯರ ಕೋಪಕ್ಕೆ ತುಪ್ಪ ಸುರಿದಂತಾಗುತ್ತದೆ.
ಹೀಗಿರುವಾಗ ಸುತ್ತಲ ಪಾಳೆಗಾರರ ಸೇನಾದಂಡು ಸೇರಿಸಿ ಕಪ್ಪ ಕೊಡಲು ನಿರಾಕರಿಸಿ ದುರಹಂಕಾರದಿಂದ ವರ್ತಿಸುತ್ತಿರುವ ಮಧುರೈ ರಾಜ ವೆಂಕಟಪತಿನಾಯಕನಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ಶ್ರೀರಂಗರಾಯ ಎಲ್ಲಾ ಪಾಳೆಗಾರರಿಗೂ ಪತ್ರ ಬರೆದು ತಿಳಿಸುತ್ತಾನೆ. ಇದಕ್ಕೆ ಮೈಸೂರು ಅರಸರು ಸೇರಿದಂತೆ ಸುತ್ತಲ ರಾಜರು ನಕಾರ ಸೂಚಿಸುತ್ತಾರೆ. ಪಾಳೆಗಾರರು ತಮ್ಮ ಅಣತಿ ನಿರ್ಲಕ್ಷಿಸುವುದಕ್ಕೆ ರಾಜ ಒಡೆಯರ್ ಕುಮ್ಮಕ್ಕು ಕಾರಣ ಎಂಬುದು ಗೊತ್ತಾಗುತ್ತದೆ. ಮೈಸೂರು ಒಡೆಯರನ್ನು ಮಟ್ಟ ಹಾಕಿದರೆ, ಇವರ ಮಾತು ಕೇಳಿಕೊಂಡು ದುರಹಂಕಾರದಿಂದ ವರ್ತಿಸುತ್ತಿರುವ ಪಾಳೆಗಾರರು ತಮ್ಮ ಶಕ್ತಿಗೆ ತಲೆಬಾಗುತ್ತಾರೆಂದು ಭಾವಿಸಿದ ಶ್ರೀರಂಗರಾಯರು ತನ್ನ ಪತ್ನಿ ಅಲಮೇಲನಮ್ಮನ ತವರೂರ ತಲಕಾಡು ಸಮೀಪದ ಮೂಲಂಗಿ ಸೇನಾ ಸಹಾಯ ಪಡೆದು ಮೈಸೂರು ಒಡೆಯರ ಮೇಲೆ ಯುದ್ದಕ್ಕೆ ಬರಲು ಕೆಸರೆ ಬಳಿ ಕಾದಿರುತ್ತಾನೆ.
ಗೂಢಚಾರರಿಂದ ವಿಷಯ ತಿಳಿದುಕೊಂಡ ಒಡೆಯರು ಮೂಲಂಗಿಯಿಂದ ಸಂಬಂಧಿಕರ ದಂಡು ಬರುವ ಮುನ್ನವೇ ಸಣ್ಣ ಸಂಖ್ಯೆಯಲ್ಲಿದ್ದ ಶ್ರೀರಂಗರಾಯರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸುತ್ತಾರೆ. ಆದರೆ ಶ್ರೀರಂಗಪಟ್ಟಣ ವಶಕ್ಕೆ ಯತ್ನಿಸುವುದಿಲ್ಲ. ಯಾವಾಗ ಮೈಸೂರು ಅರಸರು ಶ್ರೀರಂಗರಾಯರನ್ನು ಸೋಲಿಸಿದರೆಂಬ ವಿಷಯ ಗೊತ್ತಾಯಿತೋ ಸುತ್ತಲಿನ ಪಾಳೆಗಾರರು ಒಗ್ಗೂಡಿ ಶ್ರೀರಂಗಪಟ್ಟಣ ವಶಪಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಏಕೆಂದರೆ ನೂರಾರು ವರ್ಷಗಳಿಂದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿ ತಮ್ಮಿಂದ ಪಡೆದ ಕಪ್ಪಕಾಣಿಕೆಗಳು ಶ್ರೀರಂಗರಾಯನ ತಿಜೋರಿಯಲ್ಲಿದೆ. ಅದನ್ನು ಪಡೆಯಬೇಕೆಂದು ಬೇಲೂರು ಕೃಷ್ಣಪ್ಪ ನಾಯಕ, ವೀರರಾಜಯ್ಯ, ಉಮ್ಮತ್ತೂರು ಮಲ್ಲರಾಜಯ್ಯ ಮತ್ತಿತರ ಪಾಳೆಗಾರರು ಕುಣಿಗಲ್ ಪಾಳೆಗಾರರ ಅಂಗಳದಲ್ಲಿ ಬೀಡು ಬಿಡುತ್ತಾರೆ.
ಹತ್ತಾರು ಪಾಳೆಗಾರರು ತನ್ನ ಮೇಲೆ ಯುದ್ದಕ್ಕೆ ಬರುತ್ತಿರುವ ವಿಷಯ ತಿಳಿದ ಶ್ರೀರಂಗರಾಯ ಭಯಗೊಂಡು ಮೈಸೂರು ರಾಜ ಒಡೆಯರ್‍ಗೆ ಪತ್ರ ಬರೆದು ಸಹಾಯ ಕೋರುತ್ತಾನೆ. ಹತ್ತಾರು ಪಾಳೆಗಾರರು ಒಗ್ಗೂಡಿ ಶ್ರೀರಂಗಪಟ್ಟಣ ಕಬಳಿಸಿದರೆ ನೆರೆಯಲ್ಲಿರುವ ಮೈಸೂರಿಗೆ ಅಪಾಯವೆಂದು ತಿಳಿದ ರಾಜ ಒಡೆಯರ್ ಕುಣಿಗಲ್‍ಗೆ ದಂಡೆತ್ತಿ ಹೋಗಿ ವಿರೋಧಿ ಪಾಳಯವನ್ನು ಸೋಲಿಸುತ್ತಾರೆ. ಇದರಿಂದ ಸಂಪ್ರೀತರಾದ ಶ್ರೀರಂಗರಾಯರು ಅಪಾರ ಧನಕನಕ ಕಾಣಿಕೆ ನೀಡುತ್ತಾರೆ. ಎಂತಹ ಕಷ್ಟ ಬಂದರೂ ಆಪತ್ದಾಂಧವರಾಗಿ ಮೈಸೂರು ಅರಸರು ತಮ್ಮೊಂದಿಗಿದ್ದಾರೆಂದು ಶ್ರೀರಂಗರಾಯರು ನೆಮ್ಮದಿಯಾಗಿರುತ್ತಾರೆ. ಆಗಂತಹ ಅರಮನೆಯೊಳಗಿರುವ ರಾಜವಂಶಾವಳಿ ದಾಖಲೆ ಪುಸ್ತಕ ಹೇಳುತ್ತದೆ. ವಾಸ್ತವವಾಗಿ ಇದು ಬೇರೆಯೇ ರೀತಿಯಲ್ಲಿ ಇದೆ ಎಂಬುದಕ್ಕೆ ಶ್ರೀರಂಗರಾಯರ ಪತ್ನಿ ಅಲಮೇಲಮ್ಮನ ಶಾಪದ ವಿವರ ಸಾಕ್ಷ್ಯ ಒದಗಿಸುತ್ತದೆ.
ಅದೇನೆ ಇರಲಿ ಒಡೆಯರ್ ವಂಶಾವಳಿ ಪ್ರಕಾರ ಶ್ರೀರಂಗರಾಯ ಸಂಬಂಧಿ ವಿಜಯನಗರ ಸಾಮ್ರಾಜ್ಯದ ಆನೆಗೊಂದಿ ಸಂಸ್ಥಾನದ ದಳವಾಯಿ ತಿರುಮಲ ರಾಜಯ್ಯ ಶ್ರೀರಂಗರಾಯರನ್ನು ಕಾಣಲು ಶ್ರೀರಂಗಪಟ್ಟಣಕ್ಕೆ ಬರುವಾಗ ನರಸೀಪುರ ಮಾರ್ಗವಾಗಿ ಬರುತ್ತಾರೆ. ಬರುವಾಗ ಅಲ್ಲಿನ ಪಾಳೆಗಾರ ಲಕ್ಷ್ಮಪ್ಪನಾಯಕ ಬಂಧಿಸುತ್ತಾನೆ. ತಿರುಮರಾಜಯ್ಯನ ಬಿಡುಗಡೆಗೆ ಅಪಾರ ಮೊತ್ತದ ಚಿನ್ನ, ವೈಡೂರ್ಯ ಕೇಳುತ್ತಾನೆ. ಆಗ ಶ್ರೀರಂಗರಾಯರು ಮೈಸೂರು ಒಡೆಯರಾದ ರಾಜ ಒಡೆಯರ್ ಮೊರೆ ಹೋಗುತ್ತಾರೆ. ತಕ್ಷಣವೇ ಟಿ.ನರಸೀಪುರಕ್ಕೆ ದಂಡೆತ್ತಿ ಹೋಗುವ ರಾಜ ಒಡೆಯರ್ ಅಲ್ಲಿನ ಪಾಳೆಗಾರ ಲಕ್ಷ್ಮಪ್ಪನಾಯಕನನ್ನು ಸೋಲಿಸಿ ತಿರುಮಲ ರಾಜಯ್ಯನನ್ನು ಬಿಡಿಸಿ ಕರೆತರುತ್ತಾರೆ. ಇದರಿಂದ ಸಂತೋಷಗೊಂಡ ಶ್ರೀರಂಗರಾಯರು ತಮ್ಮ ಶ್ರೀರಂಗಪಟ್ಟಣ ಸಂಸ್ಥಾನಕ್ಕೆ ಸೇರಿದ ಉಮ್ಮತ್ತೂರಿಗೆ ವಳಿತವಾಗಿ ಬಂದ ತಾಯೂರು ನಾಡಿಗೆ ಸೇರಿದ ಆಲಂದೂರು, ನವಲೂರು, ಬನ್ನೂರಿಗೆ ವಳಿತವಾದ ಸೋಸಲೆ ಸ್ಥಳದ ಕೋಣಗಳ್ಳಿಯನ್ನು ಮೈಸೂರು ಅರಸರಾದ ರಾಜ ಒಡೆಯರ್‍ಗೆ ಉದಾರವಾಗಿ ನೀಡುತ್ತಾರೆ.
ಶ್ರೀರಂಗಪಟ್ಟಣದ ಶ್ರೀಮಂತ ಭಂಡಾರ ಕಬಳಿಸಲು ಬರುವ ಸುತ್ತಮುತ್ತಲಿನ ಪಾಳೆಗಾರರಿಂದ ರಕ್ಷಣೆ ಪಡೆಯಲು ಮೈಸೂರು ಅರಸರ ಆಶ್ರಯವನ್ನು ಶ್ರೀರಂಗರಾಯ ಬಯಸುತ್ತಾನೆ. ಇದಕ್ಕೆ ರಾಜ ಒಡೆಯರ್ ಸಂಪೂರ್ಣ ಸಮ್ಮತಿ ನೀಡಿರುತ್ತಾರೆ. ಹೀಗೆ ರಾಜ ಒಡೆಯರ್ ರಕ್ಷಣೆಯಲ್ಲಿ ಶ್ರೀರಂಗಪಟ್ಟಣ ಆಳುತ್ತಿದ್ದ ಸಂದರ್ಭದಲ್ಲಿ ಶ್ರೀರಂಗರಾಯರಿಗೆ ಬೆನ್ನುಫÀಣಿ ರೋಗ ಕಾಣಿಸಿಕೊಳ್ಳುತ್ತದೆ. ಬೆನ್ನುಫÀಣಿ ರೋಗ ವಾಸಿಯಾಗದೆ ಉಲ್ಬಣ ಗೊಳ್ಳುತ್ತಿದ್ದರಿಂದ ಸಂಸ್ಥಾನದ ರಕ್ಷಣೆ ಭಾರವನ್ನು ಮೈಸೂರಿನ ರಾಜ ಒಡೆಯರ್‍ಗೆ ಒಪ್ಪಿಸುತ್ತಾರೆ. ಇದಕ್ಕೆ ಕಾರಣ ಮೈಸೂರು ರಾಜವಂಶಸ್ಥರ ಪೂರ್ವಿಕರು ಶ್ರೀರಂಗರಾಯರ ವಂಶಜರೇ ಆಗಿದ್ದುದು ಪುರಾಣ ಐತಿಹ್ಯಗಳಿಂದ ತಿಳಿದುಬಂದಿರುತ್ತದೆ. ಈ ಸಂದರ್ಭದಲ್ಲಿ ತಮ್ಮ ಸುಪರ್ದಿಯಲ್ಲಿದ್ದ ವಿಜಯನಗರದ ಸಂಸ್ಥಾನದ ಮಯೂರ ಸಿಂಹಾಸನವನ್ನು ರಾಜ ಒಡೆಯರ್‍ಗೆ ಒಪ್ಪಿಸಿ ತಮ್ಮ ಪತ್ನಿ ಅಲಮೇಲಮ್ಮನೊಂದಿಗೆ ಆಕೆ ತವರೂರು ತಲಕಾಡು ಸಮೀಪದ ಮಾಲಂಗಿಗೆ ವಲಸೆ ಹೋಗುತ್ತಾರೆ.
mysore dasara
mysore dasara

ಕ್ರಿ.ಶ.1610ರ ಚೈತ್ರ ಮಾಸದಲ್ಲಿ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ರಾಜಧಾನಿ ಬದಲಿಸಿದ ರಾಜ ಒಡೆಯರ್ ಯಾವುದೇ ಶಾಸ್ತ್ರ-ಘಳಿಗೆ ನೋಡದೆ ಆತುರಾತುರವಾಗಿ ಮಯೂರ ಸಿಂಹಾಸನದ ಮೇಲೆ ಕುಳಿತು ಪಟ್ಟಾಭಿಷೇಕ ಮಾಡಿಕೊಳ್ಳುತ್ತಾರೆ. ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಶ್ರೀರಂಗ ನಾಯಕಿ ದೇವಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮುತ್ತಿನ ಮೂಗುತಿ ತೊಡಿಸಲಾಗುತ್ತಿತ್ತು. ರಾಜಾಧಿಕಾರ ಬಿಟ್ಟು ಹೋಗುವಾಗ ಮಹಾರಾಣಿ ಅಲಮೇಲಮ್ಮ ರಂಗನಾಯಕಿಗೆ ತೊಡಿಸುತ್ತಿದ್ದ ಬಂಗಾರದ ಒಡವೆಗಳನ್ನೆಲ್ಲಾ ತನ್ನ ತವರು ಮಾಲಂಗಿಗೆ ಕೊಂಡೊಯ್ದಿರುತ್ತಾಳೆ. ಇದರಿಂದ ಶ್ರೀರಂಗನಾಥ ಸ್ವಾಮಿ ದೇವಾಲಯದ ಅರ್ಚಕರು ರಾಜ ಒಡೆಯರ್‍ಗೆ ವಿಷಯ ತಿಳಿಸಿ, ಅಲಮೇಲಮ್ಮನಿಂದ ಒಡವೆ ತರಿಸಿಕೊಡಿ ಎಂದು ಭಿನ್ನವಿಸಿಕೊಳ್ಳುತ್ತಾರೆ. ಈ ಕಾರಣದಿಂದ ರಾಜ ಒಡೆಯರ್ ಮಾಲಂಗಿಯ ಅಲಮೇಲಮ್ಮನಿಗೆ ಹಲವು ಬಾರಿ ಪತ್ರ ಬರೆದು ಒಡವೆ ಹಿಂದಿರುಗಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಆದರೆ ಅಲಮೇಲಮ್ಮ ರಾಜರ ಮನವಿಯನ್ನು ತಿರಸ್ಕರಿಸುತ್ತಾರೆ. ಮುತ್ತಿನ ಮೂಗುತಿಯಿಲ್ಲದೆ ರಂಗನಾಯಕಿಗೆ ಪೂಜೆ ಮಾಡಲಾಗದು ಎಂಬ ಅರ್ಚಕರ ಬಲವಾದ ಒತ್ತಾಯದಿಂದ ರಾಜ ಒಡೆಯರ್ ಬಲವಂತವಾಗಿಯಾದರೂ ಒಡವೆ ತರುವಂತೆ ದೂತರನ್ನು ಅಲಮೇಲಮ್ಮನ ಬಳಿ ಕಳುಹಿಸುತ್ತಾರೆ. ರಾಜಭಟರು ತನ್ನ ಬೆನ್ನತ್ತಿ ಬಂದ ವಿಷಯ ತಿಳಿದ ಅಲಮೇಲಮ್ಮ ತನ್ನೆಲ್ಲಾ ಚಿನ್ನಾಭರಣಗಳನ್ನು ರಾಜ ಒಡೆಯರ್ ಕಿತ್ತುಕೊಳ್ಳಲು ಕಳುಹಿಸಿದ್ದಾರೆ ಅಂದುಕೊಂಡು ತನ್ನ ಮಡಿಲಿಗೆ ಆಭರಣಗಳನ್ನೆಲ್ಲಾ ಕಟ್ಟಿಕೊಂಡು ತಲಕಾಡು ಸಮೀಪದ ಮಾಲಂಗಿ ಮಡುವಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆ ಮಡುವಿಗೆ ಬೀಳುವ ಮುನ್ನ “ತಲಕಾಡು ಮರುಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ” ಎಂದು ಶಾಪ ಕೊಟ್ಟಳೆಂಬ ಜನಪದ ಕತೆ ಇದೆ.
ಜಾನಪದ ಕತೆ ಪ್ರಕಾರ ಶ್ರೀರಂಗರಾಯರು ಶ್ರೀರಂಗಪಟ್ಟಣ ಸಂಸ್ಥಾನವನ್ನು ಪ್ರೀತಿಯಿಂದ ಅಥವಾ ಸ್ವ ಇಚ್ಛೆಯಿಂದ ಮೈಸೂರಿನ ರಾಜ ಒಡೆಯರ್‍ಗೆ ಒಪ್ಪಿಸುವುದಿಲ್ಲ. ಇದರಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಸೇರಿದ್ದ ಮಾಂಡಲಿಕ ದೊರೆಯಾದ ಶ್ರೀರಂಗರಾಯ ಸುತ್ತಮುತ್ತಲಿನ ಮೈಸೂರು ಒಡೆಯರ್ ಸೇರಿದಂತೆ ಹಲವು ಪಾಳೆಗಾರರಿಂದ ಕಪ್ಪ ವಂತಿಗೆ ವಸೂಲಿ ಮಾಡುತ್ತಿರುತ್ತಾನೆ. ಇದರಿಂದ ಶ್ರೀರಂಗಪಟ್ಟಣದ ಸಂಸ್ಥಾನದಲ್ಲಿ ಅಪಾರವಾದ ಧನಕನಕ ಶೇಖರಣೆಯಾಗಿರುತ್ತದೆ. ವಿಜಯನಗರ ಸಾಮ್ರಾಜ್ಯ ತಾಳಿಕೋಟೆ ಕದನದಲ್ಲಿ ಅಳಿದ ನಂತರ ಅಲ್ಲಿದ್ದ ಅಪಾರ ಸಂಪತ್ತು ಬಹುಮನಿ ಸುಲ್ತಾನರ ಕೈವಶವಾಗದಂತೆ ಮಾಡಲು ರಹಸ್ಯ ಮಾರ್ಗದಲ್ಲಿ ಶ್ರೀರಂಗಪಟ್ಟಣಕ್ಕೆ ಮಯೂರ ಸಿಂಹಾಸನ ಸೇರಿದಂತೆ ಅಮೂಲ್ಯ ರತ್ನಾಭರಣಗಳ ಖಜಾನೆಯನ್ನು ವರ್ಗಾಯಿಸಲಾಗಿರುತ್ತದೆ. ಇದು ಸುತ್ತಮುತ್ತಲಿನ ಪಾಳೆಗಾರರ ಕಣ್ಣು ಬೀಳುತ್ತದೆ. ಅದರಲ್ಲಿ ಮೈಸೂರು ಸಂಸ್ಥಾನದ ಪಾಳೆಗಾರರಾದ ರಾಜ ಒಡೆಯರ್ ಬೆನ್ನುಫÀಣಿ ರೋಗದಿಂದ ಬಳಲಿ ದುರ್ಬಲರಾಗಿದ್ದ ಶ್ರೀರಂಗರಾಯರನ್ನು ಬಲಾತ್ಕಾರವಾಗಿ ಅಧಿಕಾರದಿಂದ ಪಲ್ಲಟಗೊಳಿಸಿ, ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಅಲ್ಲಿದ್ದ ನಿಧಿ ಸಂಪತ್ತನ್ನು ಮಹಾರಾಣಿ ಅಲಮೇಲಮ್ಮ ಗುಪ್ತ ಮಾರ್ಗದಲ್ಲಿ ತನ್ನ ತವರೂರು ಮಾಲಂಗಿಗೆ ಸಾಗಿಸಿರುತ್ತಾಳೆ. ವಿಷಯ ತಿಳಿದ ರಾಜ ಒಡೆಯರ್ ಸೈನಿಕರ ಮೂಲಕ ಆಕೆ ಬೆನ್ನತ್ತಿ ಸಂಪತ್ತನ್ನು ದೋಚಲು ಯತ್ನಿಸಿದಾಗ ಕೋಪಗೊಂಡ ಅಲಮೇಲಮ್ಮ “ತಲಕಾಡು ಮರುಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ” ಎಂದು ಶಾಪ ಕೊಟ್ಟಳು.
ಅಲಮೇಲಮ್ಮ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ರಾಜ ಒಡೆಯರ್ ತೀವ್ರ ದುಃಖಿತನಾಗಿ ಶಾಪ ನಿವಾರಣೆಗೆ ಅಲಮೇಲಮ್ಮನ ಚಿನ್ನದ ಪುತ್ತಳಿ ಮಾಡಿಸಿ ನಿತ್ಯ ಪೂಜೆ ಸಲ್ಲಿಸುವಂತೆ ಮಾಡುತ್ತಾರೆ. ಆದರೆ ರಾಜ ಒಡೆಯರಿಗೆ ಒಂದಿಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಭಾದ್ರಪದ ಮಾಸದಲ್ಲಿ ಕನ್ನಂಬಾಡಿಯಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲಕ್ಕೆ ಪೂಜೆ ಸಲ್ಲಿಸಿ ಬರುತ್ತಿದ್ದ ಯುವರಾಜ ನರಸರಾಜ ಒಡೆಯರ್ ಆಕಸ್ಮಿಕವಾಗಿ ಕುದುರೆಯಿಂದ ಬಿದ್ದು ಮೃತಪಡುತ್ತಾರೆ. ಮಗನ ಅಸಹಜ ಸಾವಿನಿಂದ ಕಂಗಾಲಾದ ರಾಜ ಒಡೆಯರ್ ರಾಜಪುರೋಹಿತರು, ಆಸ್ಥಾನ ಪಂಡಿತರಲ್ಲಿ ವಿಚಾರ ಮಾಡಿದಾಗ ವಿಜಯನಗರ ಸಿಂಹಾಸನ ಏರಿದ ರೀತಿ ಸರಿ ಇಲ್ಲ ಎನ್ನುತ್ತಾರೆ. ಇದಕ್ಕೆ ಜ್ಞಾನೇಶ್ವರಿ ಧರ್ಮಶಾಸ್ತ್ರ, ಮನುಸ್ಮøತಿ ಮೊದಲಾದ ಧರ್ಮಶಾಸ್ತ್ರಗಳಲ್ಲಿ ಜಾತ ಶೌಚ ಹಾಗೂ ಮೃತ ಶೌಚಗಳ ಬಗ್ಗೆ ಉಲ್ಲೇಖವಿದೆ. ನವರಾತ್ರಿಯ ಪೂರ್ವ ಜಾಡ್ಯದಲ್ಲಿ ಶುಚಿರ್ಭೂತರಾಗಿ ಸಿಂಹಾಸನರೋಹಣ ಮಾಡಬೇಕು. ಆಯುಧ ಪೂಜೆ ದಿನ ಜಗಜಟ್ಟಿಗಳಿಂದ ವಜ್ರಮುಷ್ಟಿ ಕಾಳಗ ನಡೆಸಿ ಜಟ್ಟಿಗಳಿಂದ ಚಿಮ್ಮಿದ ರಕ್ತ ಯುದ್ದಾಸ್ತ್ರಗಳಿಗೆ ಚಿಮ್ಮಬೇಕು. ನಂತರ ಹತ್ತನೇ ದಿನ ವಿಜಯದಶಮಿ ಉತ್ಸವ ನಡೆಸಿ ಶಮಿಮರಕ್ಕೆ ಪೂಜೆ ಸಲ್ಲಿಸಬೇಕೆಂದು ಸೂಚಿಸುತ್ತಾರೆ.
ಅದರಂತೆ ರಾಜ ಒಡೆಯರು 1610ರ ನವರಾತ್ರಿ ಸಂದರ್ಭದಲ್ಲಿ ದಸರೆ ಉತ್ಸವ ಆಚರಿಸುವ ಸಂಪ್ರದಾಯ ಆರಂಭಿಸಿದರು. ಇದು 1734-1766ರವೆಗೆ ಆಳಿದ ಇಮ್ಮಡಿ ಕೃಷ್ಣರಾಜ ಒಡೆಯರ್‍ವರೆಗೂ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕಳಲೇದೇವರಾಜಯ್ಯ ಹಾಗೂ ನಂಜರಾಜಯ್ಯ ಎಂಬ ದಳವಾಯಿಗಳ ಪಿತೂರಿಯಿಂದ ದುರ್ಬಲರಾದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು 1766ರಲ್ಲಿ ಅಧಿಕಾರ ಪಲ್ಲಟಗೊಳಿಸಿದ ಹೈದರಾಲಿ ಮತ್ತೆ ಒಡೆಯರ್ ಪರಿವಾರವನ್ನು ಮೈಸೂರಿಗೆ ಹಿಂದಿರುಗಿಸಿದರು.
ಹೈದರಾಲಿ ಕ್ರಿ.ಶ.1866ರಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರ್ ಕುಟುಂಬವನ್ನು ಮೈಸೂರಿಗೆ ವರ್ಗಾಯಿಸಿ,ಶ್ರೀರಂಗ ಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ. ಕ್ರಿ.ಶ.1799ರ ಮೇ.4ರಂದು ಟಿಪ್ಪು ಮರಣಾನಂತರ ಒಡೆಯರ್ ವಂಶಸ್ಥರು ಮತ್ತೆ ಶ್ರೀರಂಗಪಟ್ಟಣಕ್ಕೆ ಬಂದು ರಾಜ್ಯವಾಳಿಕೊಂಡು ಇದ್ದು ಬಿಟ್ಟಿದ್ದರೆ ಶ್ರೀರಂಗಪಟ್ಟಣ ದೊಡ್ಡ ರಾಜಧಾನಿಯಾಗಿ ಬೆಳೆದು, ಮೈಸೂರು ಅದರ ಒಂದು ತಾಲೂಕೋ ಅಥವ ಹೋಬಳಿಯಾಗಿಯೋ ಇತಿಹಾಸದಲ್ಲಿ ಉಳಿದುಬಿಡುತಿತ್ತು. ಆದರೆ ರಾಜಮಾತೆ ಲಕ್ಷಮ್ಮಣ್ಣಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಮೈಸೂರು ರಾಜ್ಯ ಪಡೆದುಕೊಂಡಾಗ ಮತ್ತೆ ಶ್ರೀರಂಗಪಟ್ಟಣಕ್ಕೆ ಹೋಗಿ ರಾಜ್ಯಭಾರ ಮಾಡಲು ಇಚ್ಚಿಸಲಿಲ್ಲ. ಹೀಗಾಗಿ ತಾವು ವಾಸಿಸುತ್ತಿದ್ದ ಮೈಸೂರಿನ ಅರಮನೆಯಲ್ಲೆ ಮೊಮ್ಮಗ 5 ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರ್‍ಗೆ ಕ್ರಿ.ಶ.1799ರ ಜುಲೈ 4ರಂದು ಪಟ್ಟಾಭಿಷೇಕ ಮಾಡಿದರು. ಹೀಗಾಗಿ ಮೈಸೂರು ಮತ್ತೆ ರಾಜಧಾನಿ ಗೌರವ ಪಡೆದು,ವಿಶ್ವದ ಸುಂದರ ನಗರವಾಗಿ ಬೆಳೆಯಿತು.
mysore dasara
mysore dasara

ಲಾರ್ಡ್ ವೆಲ್ಲೆಸ್ಲಿ ಸಲಹೆ ಮೇರೆಗೆ ಟಿಪ್ಪುವಿಗೆ ದಿವಾನರಾಗಿದ್ದ ಪೂರ್ಣಯ್ಯನವರೇ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ದಿವಾನರಾಗಿ ಮುಂದುವರೆದರು. ಹೀಗಾಗಿ ಮೈಸೂರು ಒಡೆಯರ್ ಆಳ್ವಿಕೆಯಲ್ಲಿ ಮೊದಲ ಬಾರಿ ಮಂತ್ರಿ ಅನ್ನುವ ಬದಲು ದಿವಾನ್ ಎಂಬ ಪದ ಬಳಕೆ ಆರಂಭವಾಗುತ್ತೆ. ಇದು ಕೊನೆ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‍ಗೆ ಕೊನೆಯ ದಿವಾನರಾಗಿದ್ದ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್(ಕ್ರಿ.ಶ.1946-49)ವರೆಗೆ ದಿವಾನ್ ಪದ ಬಳಕೆ ಮುಂದುವರೆಯುತ್ತೆ. ಟಿಪ್ಪುವಿಗೆ ನಿಷ್ಟರಾಗಿರದ ಪೂರ್ಣಯ್ಯನವರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಲ್ಲು ಅವಿಧೇಯರಾಗಿ ವರ್ತಿಸುತ್ತಾರೆ. ಮಹಾರಾಷ್ಟ್ರ ಮೂಲದ ಚಿತ್ಪಾಲ ಬ್ರಾಹ್ಮಣರಾದ ದಿವಾನ್ ಪೂರ್ಣಯ್ಯನವರು ಬಾಲ ಮಹಾರಾಜರನ್ನು ಕಡೆಗಣಿಸಿ,ತಮ್ಮ ಅಧಿಕಾರ ಚಲಾಯಿಸಲು ಹೋದಾಗ ರಾಜಮಾತೆ ಲಕ್ಷಮ್ಮಣ್ಣಿ ಎಚ್ಚರಿಸುತ್ತಾರೆ. ರಾಜಮಾತೆ ಬದುಕಿರುವವರೆಗು ತೆಪ್ಪಗಿದ್ದ ದಿವಾನ್ ಪೂರ್ಣಯ್ಯ ಮತ್ತೆ ಬಾಲ ಮಹಾರಾಜರ ವಿರುದ್ದ ರಾಜದ್ರೋಹದ ಕೆಲಸದಲ್ಲಿ ತೊಡಗುತ್ತಾರೆ. ಇದಕ್ಕಾಗಿ ಮಹಾರಾಷ್ಟ್ರ ಮೂಲದ ಮರಾಠ ಸೈನಿಕರನ್ನು ಸೇರಿಸಿಕೊಳ್ಳುತ್ತಾರೆ. ಇದನ್ನು ಗಮನಿಸಿದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಪರವಾಗಿನ ಅರಸು ಸಮುದಾಯ ವ್ಯಗ್ರವಾಗುತ್ತೆ. ಹೈದರಾಲಿ ಮುಸ್ಲಿಂ ಸೈನಿಕರನ್ನು ಹೆಚ್ಚಾಗಿ ಸೇರಿಸಿಕೊಂಡು, ಇಮ್ಮಡಿ ಕೃಷ್ಣರಾಜ ಒಡೆಯರ್‍ರನ್ನು ಅಧಿಕಾರದಿಂದ ಪಲ್ಲಟಗೊಳಿಸುತ್ತಿದ್ದಾರೆಂದು ಬ್ರಿಟಿಷರಿಗೆ ದೂರು ನೀಡುತ್ತಾರೆ. ಬ್ರಿಟಿಷರು ತನಿಖೆ ನಡೆಸಿದಾಗ ದಿವಾನ್ ಪೂರ್ಣಯ್ಯನವರು ಸ್ವಜನ ಪಕ್ಷಪಾತಿ ಕುಕೃತ್ಯಗಳನ್ನಷ್ಟೆ ಮಾಡದೆ, ರಾಜರ ಬೊಕ್ಕಸದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರಿಂದ ದಿವಾನ್ ಪೂರ್ಣಯ್ಯನವರನ್ನು ದಿವಾನ್ ಪದವಿಯಿಂದ ವಜಾಗೊಳಿಸುತ್ತಾರೆ. ದಿವಾನ್ ಪೂರ್ಣಯ್ಯನವರ ಮರಿಮೊಮ್ಮಗ ಪಿ.ಎನ್.ಕೃಷ್ಣಮೂರ್ತಿ ಕ್ರಿ.ಶ.1902 ರಿಂದ 1905ರವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಳಿ ದಿವಾನರಾಗಿ ಕಾರ್ಯ ನಿರ್ವಹಿಸಿದ್ದರು. ದಿವಾನ್ ಪೂರ್ಣಯ್ಯನವರಿಗೆ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿ ಜಮೀನು ನೀಡಿದ್ದರು. ಹೀಗಾಗಿ ದಿವಾನ್ ಪೂರ್ಣಯ್ಯ ಅವರ ವಂಶಜರು ಈಗಲೂ ಅಲ್ಲಿ ವಾಸಿಸುತ್ತಿದ್ದಾರೆ. ಖ್ಯಾತ ನಟ ಅವಿನಾಶ್ ದಿವಾನ್ ಪೂರ್ಣಯ್ಯನವರ ವಂಶಜರಲ್ಲಿ ಒಬ್ಬರು. ದಸರಾ ಉತ್ಸವ ಮೈಸೂರಿನಲ್ಲಿ ಮತ್ತೆ ಸಾರ್ವತ್ರಿಕವಾಗಿ ಕ್ರಿ.ಶ.1799ರಿಂದ ಆರಂಭಗೊಂಡ ನಂತರ 25ನೇ ಕೊನೆರಾಜ ಜಯಚಾಮರಾಜೇಂದ್ರ ಒಡೆಯರ್‍ವರೆಗೂ ಮುಂದುವರಿದು ಈಗ ಪ್ರಜಾಪ್ರಭುಗಳ ಕಾಲದಲ್ಲಿ ನಾನೂರ ಎಂಟನೇ ವರ್ಷದ ಆಚರಣೆ ನಡೆಯುತ್ತಿದೆ.
ಎಸ್. ಪ್ರಕಾಶ್ ಬಾಬು

Please follow and like us:
0

Leave a Comment